ಚುಚ್ಚುಮದ್ದು ವಿಧಾನ -
 ದೇಹದ ನಿರ್ದಿಷ್ಟ ಭಾಗವನ್ನು ಚುಚ್ಚಿ ದೇಹದೊಳಕ್ಕೆ ವಿಶಿಷ್ಟ ವಸ್ತುವನ್ನು ಸೇರಿಸುವಿಕೆ. ಸೋಂಕಿನಿಂದ ರಕ್ಷಣೆ ಪಡೆಯಲು ಅನುಸರಿಸುವ ಚುಚ್ಚು ಮದ್ದಿನ ವಿಧಾನಕ್ಕೆ ಇನಾಕ್ಯುಲೇಷನ್ ಎಂದೂ ರೋಗ ಚಿಕಿತ್ಸೆ ಮತ್ತು ಇತರ ಸಂದರ್ಭಗಳಲ್ಲಿ ಅನುಸರಿಸುವ ವಿಧಾನಕ್ಕೆ ಇನ್ಜೆಕ್ಷನ್ ಎಂದೂ ಹೆಸರುಂಟು. ಚುಚ್ಚುಮದ್ದು ರೋಗಚಿಕಿತ್ಸಕ ವಸ್ತುವಾಗಿರಬಹುದು, ದೇಹಪೋಷಕ ವಸ್ತುವಾಗಿರಬಹುದು. ಆದ್ದರಿಂದ ದೇಹದೊಳಗೆ ತೂರಿಸುವ ವಸ್ತುವಿನ ಮೊತ್ತ ಆಯಾ ಸಂದರ್ಭವನ್ನು ಅನುಸರಿಸಿ ಇರುತ್ತದೆ. ಜೀವಂತ ವ್ಯಕ್ತಿಗಳಿಗೆ ಚುಚ್ಚುಮದ್ದಿನ ಪ್ರಯೋಗ ಸಾಮಾನ್ಯ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಶವಗಳಿಗೂ ಚುಚ್ಚುಮದ್ದನ್ನು ಕೊಡುವುದುಂಟು. ಜೀವಂತವಾಗಿರುವ ಆದರೆ ಶಕ್ತಿಗುಂದಿದ ಇಲ್ಲವೆ ಜೀವರಹಿತವಾದ ರೋಗಾಣುಗಳನ್ನು ಚುಚ್ಚುಮದ್ದಿನ ರೀತಿ ದೇಹಕ್ಕೆ ಕೃತಕವಾಗಿ ಸೇರಿಸಿದರೆ ಈ ಅಣುಗಳು ಪ್ರತಿರೋಧಜನಕಗಳಾಗಿ (ಆಂಟಿಜೆನ್ಸ್) ವರ್ತಿಸಿ ದೇಹದಲ್ಲಿ ತಮ್ಮ ವೈಯಕ್ತಿಕ ಪ್ರತಿವಸ್ತುಗಳ (ಆಂಟಿಬಾಡೀಸ್) ಉತ್ಪತ್ತಿಯನ್ನು ಪ್ರಚೋದಿಸುತ್ತವೆ. ಈ ಪ್ರಚೋದನೆ ಪರವಸ್ತುಗಳು ದೇಹಕ್ಕೆ ಸೇರಿದ ಒಂದುವಾರದಿಂದ ಕೆಲವು ತಿಂಗಳುಗಳವರೆಗೂ ಇರುತ್ತದೆ. ಈ ಕಾಲದಲ್ಲಿ ಉತ್ಪತ್ತಿಯಾದ ಪ್ರತಿವಸ್ತುಗಳು ಅದೇ ರೋಗಾಣುಗಳಿಂದ ಮುಂದೆ ತಗಲಬಹುದಾದ ಆಗಾಧ ಸೋಂಕುಗಳ ವಿರುದ್ಧ ರಕ್ಷಣೆಯನ್ನು ಒದಗಿಸಿ ವ್ಯಕ್ತಿಗೆ ಸುಮಾರು ಒಂದರಿಂದ ಮೂರು ವರ್ಷಗಳ ವರೆಗೆ, ಕೆಲವು ಸಂದರ್ಭಗಳಲ್ಲಿ ಜೀವಮಾನ ಪರ್ಯಂತ, ರೋಗಬಾರದಂತೆ ರಕ್ಷಣೆ ಕೊಡುತ್ತವೆ. ಚುಚ್ಚುಮದ್ದಿನಿಂದ ರಕ್ಷಣೆ ಪಡೆಯುವ ಈ ವಿಧಾನಕ್ಕೆ ಇನಾಕ್ಯುಲೇಷನ್ ಎಂದು ಹೆಸರು.

	
ಮೊದಲಿಗೆ ಇನಾಕ್ಯುಲೇಷನ್ನನ್ನು ಸಿಡುಬು (ಮೈಲಿ ಬೇನೆ, ದೇವಿ, ಅಮ್ಮ) ರೋಗದಿಂದ ರಕ್ಷಣೆ ಪಡೆಯಲು ಅನುರಿಸುತ್ತಿದ್ದರೆಂದು ತಿಳಿದುಬರುತ್ತದೆ. ಬಹುಶಃ. ಏಷ್ಯಖಂಡದಲ್ಲಿ ಮಾತ್ರ ಸಿಡುಬು ಇದ್ದುದ್ದರಿಂದ ಅಲ್ಲಿಯ ಜನರೇ ಇನಾಕ್ಯುಲೇಷನ್ ವಿಧಾನವನ್ನು ಮೊತ್ತ ಮೊದಲು ಅರಿತಿದ್ದವರೆಂದು ತಿಳಿಯಬಹುದು. ಸಿಡುಬು ಬಹುಶಃ ಗ್ರೀಕರಿಗೂ ರೋಮನ್ನರಿಗೂ ತಿಳಿದಿರಲಿಲ್ಲವೆಂದು ತೋರುತ್ತದೆ. ಕ್ರೂಸೇಡುಗಳ ಕಾಲದಲ್ಲಿ ವಾಪಸಾದ ಸೈನಿಕರಿಂದ ಸಿಡುಬು ಏಷ್ಯದ ತುರ್ಕಿಯಿಂದ ಯೂರೋಪಿಗೆ ಹರಡಿತೆಂದೂ ಸಿಡುಬಿನ ವಿರುದ್ಧ ರಕ್ಷಣೆಗಾಗಿ ಏಷ್ಯದಲ್ಲಿ ಅನುಸರಿಸಲಾಗುತ್ತಿದ್ದ ಇನಾಕ್ಯುಲೇಷನ್ ವಿಧಾನವನ್ನು ಯೂರೋಪಿನಲ್ಲಿ ಮೊದಲು ಬಡಜನರೂ ಅನಂತರ ಧನಿಕರೂ ಪ್ರಾರಂಭಿಸಿದರೆಂದು ತಿಳಿದುಬಂದಿದೆ. ಇಂಗ್ಲೆಂಡಿನ ಲೇಡಿ ಮೇರಿ ವರ್ಟ್‍ಲಿ ಮಾಂಟೇಗ್ಯೂ ಎಂಬಾಕೆ 18ನೆಯ ಶತಮಾನದ ಆದಿಯಲ್ಲಿ ತುರ್ಕಿಗೆ ಭೇಟಿ ಇತ್ತಿದ್ದಳೆಂದೂ ಅಲ್ಲಿ ಆಗ ಬಹುತೀವ್ರವಾಗಿ ಸಿಡುಬಿನ ಪಿಡುಗು ಇದ್ದಿತೆಂದೂ ಅದರ ವಿರುದ್ಧ ರಕ್ಷಣೆ ಪಡೆಯಲು ತನ್ನ ಮಗನಿಗೆ ತುರ್ಕಿಯಲ್ಲಿ ಅನುಸರಿಸುತ್ತಿದ್ದ ರೀತಿ ಇನಾಕ್ಯುಲೇಷನ್ ಮಾಡಿಸಿ ಪ್ರಯೋಜನ ಪಡೆದಳೆಂದೂ ಇಂಗ್ಲೆಂಡಿಗೆ ವಾಪಸಾದ ಮೇಲೆ ಆ ವಿಧಾನವನ್ನು ಜನಪ್ರಿಯವನ್ನಾಗಿ ಮಾಡಲು ಅವಿರತವಾಗಿ ಶ್ರಮಿಸಿದಳೆಂದೂ ತಿಳಿಯುತ್ತದೆ. ಸಹಜವಾಗಿಯೇ ಜನತೆಯಲ್ಲೂ ವೈದ್ಯವೃಂದದಲ್ಲೂ ಈ ನೂತನ ಇನಾಕ್ಯುಲೇಷನ್ ವಿಧಾನಕ್ಕೆ ಬಹು ವಿರೋಧ ವ್ಯಕ್ತವಾಯಿತು. ಆದರೂ ಜೇಮ್ಸ್ ಜಾರಿನ್ ಎಂಬ ವೈದ್ಯ ಸಿಡುಬಿನ ವಿಚಾರದಲ್ಲಿ ಇನಾಕ್ಯುಲೇಷನ್ ರೀತಿಯಿಂದ ಗ್ರೇಟ್ ಬ್ರಿಟನ್ನಿನಲ್ಲಿ ಹಾಗೂ ಲಂಡನ್ನಿನಲ್ಲಿ ಎಷ್ಟು ಅನುಕೂಲವಾಗಿದೆ ಎಂಬುದನ್ನು ಅಂಕೆಅಂಶಗಳಿಂದ ವ್ಯಕ್ತಪಡಿಸಿ (1724) ಮುಂದಿನ ಮೂರು ವರ್ಷಗಳೂ ಇದೇ ರೀತಿ ಲಂಡನ್ನಿಗೆ ಅನ್ವಯಿಸಿದ ಅಂಕೆ ಅಂಶಗಳನ್ನು ಒದಗಿಸಿ ಇನಾಕ್ಯುಲೇಷನ್ ಪದ್ಧತಿಯನ್ನು ಜನಾದರಣೀಯವನ್ನಾಗಿ ಮಾಡಲು ಶ್ರಮಿಸಿದ. ಆತನ ಪ್ರಯತ್ನಕ್ಕೆ ಸಾಕಷ್ಟು ವಿರೋಧವಿತ್ತು. ಆದರೆ 1746ರಲ್ಲಿ ಸಿಡುಬಿನ ವಿರುದ್ಧ ಇನಾಕ್ಯುಲೇಷನ್ ಮಾಡುವುದಕ್ಕೆಂದೇ ಸಾರ್ವಜನಿಕ ಸಂಸ್ಥೆಗಳು ಸ್ಥಾಪಿಸಲ್ಪಟ್ಟಾಗ ಅವನ ಶ್ರಮ ಸಫಲವಾಯಿತು. ಮುಂದೆ ಎಸ್ಸೆಕ್ಸಿನ ವೈದ್ಯ ಸಟ್ಟನ್ ಎಂಬಾತನಿಂದ ಈ ಇನಾಕ್ಯುಲೇಷನ್ ವಿಧಾನ ಹೆಚ್ಚು ಉಪಯೋಗಕರವಾಗುವಂತೆ ಪರಷ್ಕರಿಸಲ್ಪಟ್ಟಿತು (1767). ಈ ವಿಧಾನದಲ್ಲಿ ವ್ಯಕ್ತಿಯ ಇನಾಕ್ಯುಲೇಷನ್ ಪೂರ್ವ ತಯಾರಿಕೆಗೆ ಒಂದು ತಿಂಗಳಿಂದ ಕೆಲವು ದಿವಸಗಳಿಗೆ ಮಿತಿಗೊಳಿಸಲ್ಪಟ್ಟಿತು. ಅಲ್ಲದೆ ಇನಾಕ್ಯುಲೇಷನ್ ಆದ ಬಳಿಕ ವ್ಯಕ್ತಿ ಗಾಳಿ ಬೆಳಕಿನಲ್ಲಿ ಇರಬಹುದಾಗಿತ್ತು. ಇನಾಕ್ಯುಲೇಷನ್ ವಿಧಾನದಲ್ಲಿ ಸಿಡುಬಿನ ಲಸಿಕೆಯನ್ನು ಆರೋಗ್ಯವಾಗಿರವ ವ್ಯಕ್ತಿಯ ಚರ್ಮದ ಗಾಯದ ಮೂಲಕ ದೇಹದ ಒಳಹೊಗಿಸುತ್ತಿದ್ದರು. ಆಗ ವ್ಯಕ್ತಿಗಳಲ್ಲಿ ಸಿಡುಬು ರೋಗವೇ ಉಂಟಾಗುತ್ತಿತ್ತು. ಇದರಿಂದ ಗುಣಹೊಂದಿದ ಮೇಲೆ ವ್ಯಕ್ತಿಗೆ ಪುನಃ ಸಿಡುಬು ಅಂಟುತ್ತಿರಲಿಲ್ಲ. ಇನಾಕ್ಯುಲೇಷನ್ನಿನಿಂದ ಉಂಟಾದ ರೋಗ ಪ್ರಬಲವಾಗಿರುವುದಿಲ್ಲವೆಂದು ಆಶಿಸಲಾಗುತ್ತಿತ್ತು. ಆದರೆ ಇನಾಕ್ಯುಲೇಷನ್ ವಿಧಾನದಿಂದ ಉಂಟಾದ ಪರಿಣಾಮ ಅನೇಕವೇಳೆ ಮಾರಕವೇ ಆಗುತ್ತಿದ್ದುದರಿಂದ ಅದರಿಂದ ರಕ್ಷಣೆ ಒದಗುವ ಬದಲು ಹಾನಿಯೇ ಆಗುತ್ತಿತ್ತು. ಅಲ್ಲದೆ ಇನಾಕ್ಯುಲೇಷನ್ ಆದ ವ್ಯಕ್ತಿಯಿಂದ ಸಿಡುಬು ನೆರೆಯವರಿಗೂ ಹರಡುತ್ತಿತ್ತು.

	1780-85ರ ವೇಳೆಯಲ್ಲಿ ಇಂಗ್ಲೆಂಡಿನ ವೈದ್ಯ ಎಡ್ವರ್ಡ್ ಜೆನ್ನರ್ ಎಂಬಾತ ಸಿಡುಬಿನ ವಿಚಾರವಾಗಿ ಅಧ್ಯಯನ ಮಾಡುತ್ತಿದ್ದಾಗ ಸಿಡುಬಿನಿಂದ ಪೀಡಿತವಾದ ಹಸುಗಳ ಸಂಪರ್ಕದಿಂದ ಅವುಗಳ ಹಾಲು ಕರೆಯುವ ಹೆಂಗಳೆಯರಿಗೆ ದನದ ಸಿಡುಬು ಅಂಟುತ್ತಿತ್ತೆಂದೂ ಅದು ಮಾರಕವಾಗಿರದೆ ಎಲ್ಲರೂ ಗುಣಹೊಂದುತ್ತಿದ್ದರೆಂದೂ ಗಮನಿಸಿದ್ದ. ಇಂಥವರಿಗೆ ಮಾನವ ಸಿಡುಬು ಅಂಟುವುದಿಲ್ಲವೆಂಬುದು ಅಂಥ ಒಬ್ಬ ಕಾವಾಡಗಿತ್ತಿಯ ಮಾತಿನಿಂದ ವ್ಯಕ್ತಪಟ್ಟು ಅದು ನಿಜವಿರಬಹುದೆಂದು ಬೇರೆ ದೃಷ್ಟಾಂತಗಳಿಂದಲೂ ಚೆನ್ನರಿಗೆ ಅರಿವಾಯಿತು. ಅಲ್ಲದೆ ಮಾನವರಲ್ಲಿ ದನದ ಸಿಡುಬು ಮಾನವನ ಸಿಡುಬಿನಂತೆ ಪ್ಯಾಪಕವಾಗಿ ಮೈಮೇಲೆಲ್ಲ ಏಳದೆ ಸೋಂಕುಂಟಾದ ಒಂದೆರಡು ಸ್ಥಳಗಳಲ್ಲಿ ಮಾತ್ರ ಕಾಣಿಸಿಕೊಳ್ಳುವುದನ್ನೂ ಜೆನ್ನರ್ ತಿಳಿದಿದ್ದ. ದನದ ಸಿಡುಬಿನ ರಸಿಕೆಯನ್ನು ಇನಾಕ್ಯುಲೇಷನ್ ಮಾಡಿ ಬೇರೆ ವ್ಯಕ್ತಿಯಲ್ಲಿ ಕೂಡ ಹೀಗೆ ಸ್ಥಳೀಯವಾಗಿ ದನದ ಸಿಡುಬು ಉಂಟಾಗುವಂತೆ ಮಾಡಬಹುದೆಂದು ಇದರಿಂದ ಅವರೂ ಮಾನವಸಿಡುಬಿನಿಂದ ರಕ್ಷಣೆ ಪಡೆಯಬಲ್ಲರೆಂದೂ ಜೆನ್ನರ್ ತರ್ಕಿಸಿದ. ಅದರಂತೆ 1796ನೆ ಮೇ ತಿಂಗಳು 14ನೆಯ ತಾರೀಕಿನಂದು ಸಾರಾ ನ್ಯೂಲ್ಮ ಎಂಬ ಕಾವಾಡಗಿತ್ತಿಯ ದನಸಿಡುಬಿನ ರಸಿಕೆಯನ್ನು ಫಿಪ್ಸ್ ಎಂಬ ಹುಡುಗನ ತೋಳಿನ ಚರ್ಮದ ಗಾಯದೊಳಕ್ಕೆ ಹುಗಿಸಿದ. ಅವನ ತರ್ಕಕ್ಕೆ ಸರಿಯಾಗಿ ದನದ ಸಿಡುಬು ಆ ಹುಡುಗನಲ್ಲಿ ಕಾಣಿಸಿಕೊಂಡು ಅನಂತರ ಮಾಮೂಲಿನಂತೆಯೇ ವಾಸಿಯಾಯಿತು. ಇದಾದ ಬಳಿಕ ಆ ಹುಡುಗನಿಗೆ ಮಾನವ ಸಿಡುಬಿನ ಲಸಿಕೆಯನ್ನು ಇನಾಕ್ಯುಲೇಷನ್ ಮಾಡಿದಾಗಲೂ ಜೆನ್ನರ್ ತರ್ಕಿಸಿದ್ದಂತೆಯೇ, ಸಿಡುಬು ಅಂಟಲಿಲ್ಲ. ಮುಂದೆ ಸುಮಾರು 2 ವರ್ಷಗಳು ದನಗಳಲ್ಲಿ ಸಿಡುಬು ಕಾಣಬರಲಿಲ್ಲವಾಗಿ ಜೆನ್ನರ್ ಈ ವ್ಯಾಸಂಗವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. 1798ರಲ್ಲಿ ದನಗಳಲ್ಲಿ ಪುನಃ ಸಿಡುಬು ತಲೆದೋರಿತು. ಆಗ ಜೆನ್ನರ್ ಪುನಃ ಪ್ರಯೋಗಗಳಿಂದ ತಾನು ಕಂಡುಹಿಡಿದಿದ್ದ ವಿಷಯವನ್ನು ಸ್ಥಿರೀಕರಿಸಿದ. ದನ ಸಿಡುಬಿಗೆ ವ್ಯಾಕ್ಸೀನಿಯ ಎಂಬ ಹೆಸರಿದ್ದು ಮಾನವ ಸಿಡುಬುರೋಗದಿಂದ ರಕ್ಷಣೆ ಪಡೆಯಲು ತಾನು ಅನುಸರಿಸುತ್ತಿದ್ದ ವಿಧಾನಕ್ಕೆ ಜೆನ್ನರ್ ವ್ಯಾಕ್ಸಿನೇಷನ್ ಎಂದು ಕರೆದ. ವ್ಯಾಕ್ಸಿನೇಷನ್ ಪ್ರಚಾರಕ್ಕೆ ಬಂದ ತರುವಾಯ ಸಿಡುಬಿನಿಂದ ರಕ್ಷಣೆ ಪಡೆಯಲು ಸಟ್ಟನ್ನನ ಇನಾಕ್ಯುಲೇಷನ್ ವಿಧಾನ ಕೈಬಿಡಲ್ಪಟ್ಟಿತು ಮತ್ತು 1840ರಲ್ಲಿ ಕಾನೂನು ರೀತಿ ಬಹಿಷ್ಕರಿಸಲ್ಪಟ್ಟಿತು. 1853ರಲ್ಲಿ ಇಂಗ್ಲೆಂಡಿನಲ್ಲಿ ಸಿಡುಬು ನಿರ್ಮೂಲನಕ್ಕಾಗಿ ವ್ಯಾಕ್ಸಿನೇಷನ್ ಕಡ್ಡಾಯ ವಿಧಾನವಾಯಿತು. ಅಲ್ಲಿಂದಿಚೆಗೆ ಪ್ರಪಂಚದ ಎಲ್ಲ ಕಡೆಯೂ ವ್ಯಾಕ್ಸಿನೇಷನ್ ಬಳಕೆಯಲ್ಲಿದೆ.

	ಅಲೆಕ್ಸಾಂಡರ್ ವುಡ್ ಮತ್ತು ಚಾಲ್ರ್ಸ್ ಗೇಬ್ರಿಯಲ್ ಪ್ರಾವೆಸ್ ಎಂಬವರು 1853ರಲ್ಲಿ ಟೊಳ್ಳು ಸೂಜಿಯನ್ನು ಉಪಜ್ಞಿಸಿದರು. ಇದರಿಂದ ಇನಾಕ್ಯುಲೇಷನ್ನುಗಳಿಗೆ ಪಿಚಕಾರಿಯನ್ನು ಟೊಳ್ಳು ಸೂಜಿಯನ್ನು ಉಪಯೋಗಿಸಲು ಅನುಕೂಲವಾಯಿತು. ಸ್ಲ್ಪೆನಿಕ್ ಜ್ವರದಿಂದ (ನೆರಡಿರೋಗ, ಆಂತ್ರಾಕ್ಸ್) ರಕ್ಷಣೆ ಪಡೆಯುವುದಕ್ಕೋಸ್ಕರ ಸೂಜಿ ಪಿಚಕಾರಿಗಳಿಂದ ಇನಾಕ್ಯುಲೇಷನ್ನನ್ನು ಪ್ರಾಣಿಗಳಲ್ಲಿ ಉಪಯೋಗಿಸಲಾಯಿತು (1881). ಕೃತಕ ಮಾಧ್ಯಮದಲ್ಲಿ ಕೃಷಿಮಾಡಿ ಸಾರಗುಂದಿಸಿದ ವಿಷಾಣುಗಳನ್ನು ಪಿಚಕಾರಿ ಸೂಜಿಗಳ ಮೂಲಕ ಕುರಿದನಗಳ ದೇಹದೊಳಹೊಗಿಸಿದರೆ ಅವುಗಳಲ್ಲಿ ರೋಗಲಕ್ಷಣಗಳು ಬಹು ಅಲ್ಪವಾಗಿ ಕಾಣಿಸಿಕೊಳ್ಳುತ್ತವೆ. ಅನಂತರ ಅವು ಪ್ರಬಲ ಸೋಂಕಿನಿಂದಲೂ ಅಕ್ರಮಣಗೊಳ್ಳಲಾರವೆಂದು ಲೂಯಿ ಪಾಸ್ಚರ್ (1822-1895) ಖಚಿತವಾದ ಪ್ರಯೋಗದಿಂದ ತೋರಿಸಿದ (1881). ಇದೇ ರೀತಿ ನಾಯಿಗಳಲ್ಲೂ ಮಾನವರಲ್ಲೂ ನಾಯಿ ಹುಚ್ಚನ್ನು ತಡೆಗಟ್ಟಬಹುದು ಎಂದೂ ಕೂಡ ಪಾಸ್ಚರ್ ತೋರಿಸಿದ. ರಾಬರ್ಟ್ ಕಾಕ್ (ನೋಡಿ- ಕಾಕ್-ರಾಬರ್ಟ್) ಎಂಬ ಜರ್ಮನ್ ವೈದ್ಯ ಕೃತಕವಾಗಿ ಬೆಳೆಸಿದ ಕ್ಷಯಾಣುಗಳಿಂದ ತಯಾರಾದ ಟ್ಯುಬರ್ ಕ್ಯುಲಿನ್ ಎಂಬ ವಸ್ತುವನ್ನು ಇನಾಕ್ಯುಲೇಷನ್ ಮಾಡಿ ಕ್ಷಯರೋಗ ಸೋಂಕಿನ ವಿರುದ್ಧ ರಕ್ಷಣೆ ಪಡೆಯಲು ಪ್ರಯತ್ನಿಸಿದ (1802). ಆದರೆ ಇದು ತಕ್ಕಷ್ಟು ಪರಿಣಾಮಕಾರಿಯಾಗಿರದೆ ಪ್ರಸಕ್ತ ಕಾಲದಲ್ಲಿ ಈ ಚುಚ್ಚುಮದ್ದನ್ನು ಮಾನವನಲ್ಲಿ ಮತ್ತು ಮುಖ್ಯವಾಗಿ ಕರಾವಿನ ದನಗಳಲ್ಲಿ ಕ್ಷಯರೋಗ ಪತ್ತೆಗೆ ಉಪಯೋಗಿಸಲಾಗುತ್ತಿದೆ. ರೋಗ ರಕ್ಷಣೆಗೆ ಉಪಯೋಗಿಸುವ ಚುಚ್ಚುಮದ್ದು ಅಥವಾ ಇನಾಕ್ಯುಲೇಷನ್ನುಗಳನ್ನು ಹಳದಿ ಜ್ವರ, ವಿಷಮಶೀತಜ್ವರ, ಪ್ಲೇಗ್, ಕಾಲರಾ, ಡಿಫ್ತೀರಿಯ, ನಾಯಿಕೆಮ್ಮು ಮತ್ತು ಟೆಟನಸ್ ರೋಗಗಳನ್ನು ತಡೆಗಟ್ಟಲು ಹಾವು ಕಡಿತದ ಸಂದರ್ಭಗಳಲ್ಲೂ ಬಳಸಲಾಗುತ್ತಿದೆ.

	ಪಿಚಕಾರಿ ಸೂಜಿಗಳಿಂದ ರೋಗಚಿಕಿತ್ಸೆ ಮತ್ತು ಇತರ ಉದ್ದೇಶಗಳಿಗಾಗಿ ನಿರ್ದಿಷ್ಟ ದ್ರವ್ಯಗಳನ್ನು ದೇಹದೊಳಹೊಗಿಸುವ ವಿಧಾನಕ್ಕೆ ಇನ್ಜೆಕ್ಷನ್ ಎಂದು ಹೆಸರು. ಇನ್ಜೆಕ್ಷನ್ ಮತ್ತು ಇನಾಕ್ಯುಲೇಷನ್ನುಗಳಿಗೆ ಸೂಜಿಮದ್ದು ಎಂದು ಕರೆಯಬಹುದು. ಇವುಗಳಿಗೆ ಉಪಯೋಗಿಸುವ ಪಿಚಕಾರಿಗಳನ್ನು ಸಾಧಾರಣವಾಗಿ ಗಾಜಿನಿಂದ ಮಾಡಿರುತ್ತಾರೆ. ಇವುಗಳ ಉದ್ದ ಗಾತ್ರ ಆಕಾರಗಳು ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ಆಗಿರುತ್ತವೆ. ಪಿಚಕಾರಿಯ ತುದಿಗೆ ಟೊಳ್ಳು ಸೂಜಿಯನ್ನು ಬಿಗಿಯಾಗಿ ಸಿಕ್ಕಿಸಬಹುದು. ಸೂಜಿ ಕಳಚಿಕೊಳ್ಳದಂತೆ ಕೆಲವು ಪಿಚಕಾರಿಗಳಲ್ಲಿ ಲ್ಯೂವರ್ ಲಾಕ್ ಎಂಬ ವಿಶೇಷ ಏರ್ಪಾಡು ಉಂಟು. ಉಪಯೋಗಿಸುವ ದ್ರವ್ಯದ ಮಂದತ್ವವನ್ನು ಅನುಸರಿಸಿ ವಿವಿಧ ಗಾತ್ರದ ಸೂಜಿಗಳನ್ನೂ ಇನ್ಜೆಕ್ಷನ್ ಮಾಡುವ ಆಳವನ್ನು ಅನುಸರಿಸಿ ವಿವಿಧ ಉದ್ದ ಸೂಜಿಗಳನ್ನೂ ಉಪಯೋಗಿಸಲಾಗುತ್ತದೆ. ಇನ್ಜೆಕ್ಷನ್ ಮಾಡುವ ದ್ರವ್ಯದ ಪರಿಮಾಣವನ್ನು ತಿಳಿಯಲು ಪಿಚಕಾರಿಯಲ್ಲಿ ಅಳತೆ ಗುರುತುಗಳಿರುತ್ತವೆ. ಚಿಕಿತ್ಸಕ ವಸ್ತುಗಳನ್ನು ಬಾಯಿಮೂಲಕ ತೆಗೆದುಕೊಳ್ಳುವುದಕ್ಕಿಂತ ಬಹು ಕಡಿಮೆ ಪರಿಮಾಣದಲ್ಲಿ ಇನ್ಜೆಕ್ಷನ್ ಮೂಲಕ ತೆಗೆದುಕೊಂಡರೆ ಸಾಕು ; ಮತ್ತು ಹಾಗೆ ತೆಗೆದುಕೊಂಡ ಕೇವಲ ಹತ್ತು ಮಿನಿಟುಗಳಲ್ಲಿ ಅವುಗಳ ಪ್ರಯೋಜನ ಕಂಡುಬರುತ್ತದೆ. ಈ ಕಾರಣದಿಂದ ನೋವು ಶಮನ ಮಾಡಿ ನಿದ್ರೆಬರಿಸುವುದಕ್ಕೋಸ್ಕರ ಮಾರ್ಫೀನನ್ನೂ ಹೆರಿಗೆಯಾದ ಮೇಲೆ ಗರ್ಭಕೋಶವನ್ನು ಸಂಕುಚಿಸಿ ರಕ್ತಸ್ರಾವವನ್ನು ತಡೆಗಟ್ಟಲು ಎರ್ಗಾಟ್ ಸಾರವನ್ನೂ ಕ್ಷಿಪ್ರ ಮತ್ತು ಅಲ್ಪಪ್ರಯಾಸದ ವಮನವನ್ನುಂಟು ಮಾಡಲು ಅಪೋಮಾರ್ಫೀನನ್ನೂ ಇನ್ಜೆಕ್ಷನ್ ವಿಧಾನದಿಂದ ಉಪಯೋಗಿಸುತ್ತಾರೆ. ಇನ್ಜೆಕ್ಷನ್ನುಗಳನ್ನು ಚರ್ಮದ ಕೆಳಗಾಗಲಿ ಸ್ನಾಯುಗಳ ಒಳಗಾಗಲಿ ರಕ್ತನಾಳಗಳ ಒಳಗಾಗಲಿ ಸೂಜಿಯನ್ನು ಚುಚ್ಚಿ ಮಾಡಲಾಗುತ್ತದೆ. ಇವಕ್ಕೆ ಅನುಕ್ರಮವಾಗಿ ಸಬ್‍ಕ್ಯೂಟೇನಿಯಸ್/ ಹೈಪೋಡರ್ಮಿಕ್, ಇಂಟ್ರಮಸ್ಕ್ಯುಲರ್/ ಇಂಟ್ರವ್ಯಾಸ್ಕುಲರ್ ಇನ್ಜೆಕ್ಷನುಗಳೆಂದು ಹೆಸರು. ಸೂಜಿಯನ್ನು ಮಿದುಳು ಮತ್ತು ಮಿದುಳು ಬಳ್ಳಿಗಳಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಚುಚ್ಚಿ ಇನ್ಜೆಕ್ಷನ್ ಕೊಡುವುದೂ ಉಂಟು. ಇವಕ್ಕೆ ವೆಂಟ್ರೀಕಲ್ ಮತ್ತು ಸೈನಲ್ ಇನ್ಜೆಕ್ಷನುಗಳೆಂದು ಹೆಸರು. ವಿಶೇಷ ಸಂದರ್ಭಗಳಲ್ಲಿ ಗುಂಡಿಗೆಯೊಳಕ್ಕೆ ಸೂಜಿಯನ್ನು ಚುಚ್ಚಿ ಇನ್ಜೆಕ್ಷನ್ ಕೊಡುವುದೂ ಉಂಟು. ಇದಕ್ಕೆ ಇಂಟ್ರಕಾರ್ಡಿಯೇಕ್ ಇನ್ಜೆಕ್ಷನ್ ಎಂದು ಹೆಸರು.

	ಟ್ಯುಬರ್ ಕ್ಯುಲಿನ್ನಿನಿಂದ ರೋಗನಿದಾನಕ್ಕೆ ಉಪಯೋಗಿಸುವ ವಸ್ತುಗಳನ್ನು ಚರ್ಮಕ್ಕೆ ಮಾತ್ರವೇ ಚುಚ್ಚಿ ಮಾರನೇ ದಿನ ದದ್ದುಬರುವುದೋ ಇಲ್ಲವೋ ಎಂದು ನೋಡುತ್ತಾರೆ. ಡಿಫ್ರೀರಿಯ, ಸ್ಕಾರ್ಲೆಟಜ್ವರ ಇವುಗಳಿಗೆ ತುತ್ತಾಗುವುವವರನ್ನು ಪತ್ತೆ ಮಾಡುವುದಕ್ಕೂ ಒಗ್ಗದಿಕೆಯನ್ನು ಉಂಟುಮಾಡುವ ವಸ್ತುಗಳ ಪತ್ತೆ ಮೂಡುವುದಕ್ಕೂ ಇಂಥ ಇನ್ಜೆಕ್ಷನುಗಳನ್ನು ಕೊಡುತ್ತಾರೆ. ಇವಕ್ಕೆ ಇಂಟ್ರಿಡರ್ಮಲ್ ಇನ್ಜೆಕ್ಷನುಗಳೆಂದು ಹೆಸರು. ನೀರಿನಲ್ಲಿ ಕರಗುವ ವಸ್ತುಗಳನ್ನು ಎಲ್ಲ ರೀತಿನ ಇನ್ಜೆಕ್ಷನುಗಳಾಗಿ ಉಪಯೋಗಿಸಬಹುದು. ಇಂಟ್ರಮಸ್ಕ್ಯುಲರ್ ಇನ್ಜೆಕ್ಷ್ ಹೈಪೋಡರ್ಮಿಕ ಇನ್ಜೆಕ್ನನ್ನಿಗಿಂತ ಬೇಗಲೂ ಇಂಟ್ರವ್ಯಾಸ್ಕ್ಯುಲರ್ ಇನ್ಜೆಕ್ಷನ್ (ಇಂಟ್ರವೀನಸ್ ಇನ್ಜೆಕ್ಷನ್) ಇಂಟ್ರಮಸ್ಕ್ಯುಲರ್ ಇನ್ಜೆಕ್ಷನ್ನಿಗಿಂತ ಬೇಗಲೂ ಕೆಲಸ ಮಾಡುತ್ತವೆ. ಔಷಧ ನಿಧಾನವಾಗಿ ಕೆಲಸಮಾಡಬೇಕಾದರೆ ಹೈಪೋಡರ್ಮಿಕ್ ಇನ್ಜೆಕ್ಷನ್ನಾಗಿ ಕೊಡಲ್ಪಡುತ್ತದೆ. ಇನ್ಸುಲಿನ್, ಸ್ಥಳಿಕ ಸಂವೇದನಾಶಕಗಳು ಇಂಥವು. ವಿಷಮಶೀತಜ್ವರದ, ಹಳದಿಜ್ವರದ ಟೆಟನಸ್ ಡಿಫ್ತೀರಿಯಗಳ ಇನಾಕ್ಯುಲೇಷನ್ನುಗಳೂ ಇಂಥವೇ. ಮದ್ದು ಊತಕವನ್ನು ನಾಶಪಡಿವಂಥದಾದ್ದರೆ ಅಥವಾ ಬಹುನೋವನ್ನು ಉಂಟು ಮಾಡುವಂತಿದ್ದರೆ ಇಂಟ್ರಿಮಸ್ಕ್ಯುಲರ್ ಅಥವಾ ಇಂಟ್ರವೀನಸ್ ಇನ್ಜೆಕ್ಷನ್ನಾಗಿ ಕೊಡಬೇಕಾಗುತ್ತದೆ. ಕೆಲವು ಜೀವಸತ್ತ್ವಗಳು, ಕ್ವಿನೀನ್ ಎಮಿಟೇನಿನಂಥ ಊತಕ ಮಾರಕವಸ್ತುಗಳು ಪೆನಿಸಿಲ್ಲಿನಿನಂಥ ಜೀವಿರೋಧಕಗಳನ್ನು ಹೀಗೆ ಕೊಡುವುದುಂಟು. ನೀರಿನಲ್ಲಿ ಕರಗದ ಪದಾರ್ಥವಾದರೆ ಅಥವಾ ಜಿಡ್ಡು ಪದಾರ್ಥವಾದರೆ ಅದನ್ನು ಇಂಟ್ರಮಸ್ಕ್ಯುಲರ್ ಇನ್ಜೆಕ್ಷನ್ನಾಗಿಯೆ ಕೊಡಬೇಕಾಗುತ್ತದೆ. ಪ್ರೋಕೇನ್ ಪೆನಿಸಿಲಿನ್, ಲೈಂಗಿಕ ಹಾರ್ಮೋನುಗಳನ್ನು ಈ ರೀತಿ ಕೊಡಲಾಗುತ್ತದೆ.

	ಬಾಯಿ ಮೂಲಕ ತೆಗೆದುಕೊಳ್ಳಲಾಗದಂಥ, ತೆಗೆದುಕೊಂಡರೆ ಪ್ರಯೋಜನವಿಲ್ಲದಂತ ಸಂದರ್ಭಗಳಲ್ಲಿ ಅಗತ್ಯ ವಸ್ತುಗಳನ್ನು ಇನ್ಜೆಕ್ಷನುಗಳಿಂದ ದೇಹದೊಳಕ್ಕೆ ಸೇರಿಸಬಹುದು. ವಿಪರೀತ ವಾಂತಿ ಭೇದಿಗಳಿಂದ. ಇಲ್ಲವೆ ಅನ್ನನಾಳದ ಮೇಲೆ ಶಸ್ತ್ರ ಚಿಕಿತ್ಸೆಯಿಂದ ಆಹಾರಸೇವನೆ ಅಸಾಧ್ಯ ಅಥವಾ ಅಪ್ರಯೋಜಕಾವಾದ ದೇಹಕ್ಕೆ ದ್ರವ ಮತ್ತು ಆಹಾರವನ್ನು ಔಷಧ ಸಾಮಾಗ್ರಿಗಳನ್ನು ಒದಗಿಸಲು ಇನ್ಜೆಕ್ಷನ್ ವಿಧಾನವನ್ನು ಅನುಸರಿಸಬಹುದು. ಅಭಿಧಮನಿಯೊಳಗೆ ಸೂಜಿಯನ್ನು ತೂರಿಸಿ ಸ್ಥಿರವಾಗಿಟ್ಟು ತೊಟ್ಟು ತೊಟ್ಟಾಗಿ ಗ್ಲೂಕೋಸ್, ಉಪ್ಪು, ಔಷಧಗಳು-ಇವು ಇರುವ ದ್ರವವನ್ನು ಕೆಲವು ಗಂಟೆಗಳು ನಿರಂತರವಾಗಿ ಕೊಡಲಾಗುತ್ತದೆ. ತತ್‍ಕ್ಷಣದ ದ್ರವ ಪೂರೈಕೆಗೆ ಸ್ವಾಭಾವಿಕವಾಗಿಯೇ ಇಂಟ್ರವೀನಸ್ ವಿಧಾನವನ್ನು ಅನುಸರಿಸಲಾಗುತ್ತದೆ. ಗುಂಡಿಗೆ ಹಠಾತ್ ನಿಂತುಹೋದಾಗ ಇಲ್ಲವೇ ವ್ಯಕ್ತಿ ಘೋರಘಾತದಿಂದ ಸಂಮರ್ದನನಾಗಿದ್ದಾಗ ಅವನಿಗೆ ಅಪಧಮನಿಯೊಳಗಿನ ಒಗ್ಗುವ ಪರರಕ್ತವನ್ನು ಇನ್ಜೆಕ್ಷನ್ ಮೂಲಕ (ಇಂಟ್ರ ಆರ್ಟೀರಿಯಲ್ ಇನ್ಜೆಕ್ಷನ್) ವ್ಯಕ್ತಿಯ ದೇಹದೊಳಕ್ಕೆ ಸೇರಿಸಲಾಗುತ್ತದೆ. ಇನ್ಜೆಕ್ಷನ್ ಕೊಟ್ಟು ಊತಕನಾಶದಿಂದ ಸ್ಥಳೀಕವಾಗಿ ರಕ್ತನಾಳ ಕುಗ್ಗುವಂತೆ ಮಾಡಿ ಮೊಳೆರೋಗವನ್ನು (ಮೂಲವ್ಯಾಧಿ) ಕಾಲುತೊಡೆಗಳಲ್ಲಿನ ಉಡಿತರಕ್ತನಾಳಗಳನ್ನೂ (ವೇರಿಕೋಸ್ ವೆಯ್ನ್ಸ್ (ಕೊಂಕಿದ ಸಿರಗಳು) ಚಿಕಿತ್ಸೆ ಮಾಡಲಾಗುತ್ತದೆ. ಗುದದ್ವಾರದಲ್ಲಿ ಸೀಳು ಉಂಟಾಗಿ ಅತಿನೋವು ಉಂಟಾದಾಗ ನೋವು ಶಮನಕ್ಕೆ ಮದ್ದನ್ನು ಇನ್ಜೆಕ್ಷನ್ ಮೂಲಕ ಗುದದ ಲೋಳೆಪೊರೆಯೊಳಕ್ಕೆ ಚುಚ್ಚಲಾಗುತ್ತದೆ. ಎಕ್ಸ್‍ಕಿರಣಕ್ಕೆ ಪಾರಕವಾಗಿಲ್ಲದ ವಸ್ತುಗಳ ದ್ರವವನ್ನು ಅಭಿಧಮನ್ಯಂತರ ಇನ್ಜೆಕ್ಷನ್ ರೀತಿ ಬಳಸಿ ಎಕ್ಸ್‍ಕಿರಣಗಳ ನೆರವಿನಿಂದ ರಕ್ತನಾಳ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದಕ್ಕೆ ಇಂಟ್ರವೀನಸ್ ಪಯಯಲೋಗ್ರಫಿ ಎಂದು ಹೆಸರು. ಬೆನ್ನುಹುರಿ ಇನ್ಜೆಕ್ಷನುಗಳಿಂದ ಮಿದುಳು ಬಳ್ಳಿಯ ಸಂದೇಶವಾಹಕ ಸಾಮಥ್ರ್ಯವನ್ನು ತಾತ್ಕಾಲಿಕವಾಗಿ ನಾಶಮಾಡಿ ಸಂವೇದನ ನಾಶವನ್ನೂ ಚಲನಸಾಮಥ್ರ್ಯ ನಾಶವನ್ನೂ ಉಂಟುಮಾಡಿ ಶಸ್ತ್ರಕ್ರಿಯೆಗೆ ಅನುಕೂಲ ಮಾಡಿಕೊಳ್ಳಲಾಗುತ್ತದೆ.

	ಶವಗಳಲ್ಲಿ ಇನ್ಜೆಕ್ಷನ್ ಕೊಡುವುದು ಎರಡು ಕಾರಣಕ್ಕಾಗಿ. ಮೊದಲನೆಯದು ಶವವನ್ನು ಸ್ವಲ್ಪಕಾಲ ಕೊಳೆಯದಂತೆ ಸಂರಕ್ಷಿಸುವುದಕ್ಕೆ. ಎರಡನೆಯದಾಗಿ ಅಂಗಛೇದನೆ ವ್ಯಾಸಂಗದಲ್ಲಿ ಅಭಿಧಮನಿ ಅಪಧಮನಿಗಳನ್ನು ಬೇರೆ ಬೇರೆಯಾಗಿ ಗುರುತಿಸುವುದಕ್ಕೆ.
(ಎಸ್.ಆರ್.ಆರ್.ಆರ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ